ಪಾಜೋವು ಶಿವಸುಬ್ರಹ್ಮಣ್ಯರ ಕೃಷಿ ಭೂಮಿಯಲ್ಲಿ ನಿರಂತರ
ಹರಿನೀರಿನ ಝರಿಯಿದೆ. ಇದನ್ನು
ಕೆರೆಯಲ್ಲಿ ತುಂಬಿಕೊಂಡು ಅಡಿಕೆ ತೋಟಕ್ಕೆ ಪೂರೈಸುತ್ತಾರೆ.
ಇದೇ ನೀರು ಗುಡ್ಡದ ತುದಿಯ ಮನೆ ಬಳಕೆಯ ನೀರಿನ ಟ್ಯಾಂಕಿಗೂ
ಹೋಗಬೇಕು. ಇದಕ್ಕಾಗಿ ವಿದ್ಯುತ್ ಮೋಟಾರು ಬಳಸುತ್ತಿದ್ದರು.
ಶಿವಸುಬ್ರಹ್ಮಣ್ಯ ವಿದ್ಯುತ್ತಿನ ಹಂಗಿಲ್ಲದೆ ಈ ನೀರನ್ನು
ಮೇಲೆತ್ತುವ ಬಗ್ಗೆ ಚಿಂತಿಸತೊಡಗಿದರು. ಈ ಬಗ್ಗೆ ಅಧ್ಯಯನ ಮಾಡಿದಾಗ ಹೈಡ್ರಾಮ್ ಪಂಪಿನ ಬಗ್ಗೆ ಒಲವು ಮೂಡಿತು. ಇಂತಹ ಪಂಪ್ ಸ್ಥಳೀಯವಾಗಿ
ಅಲಭ್ಯ.
ಜಾಲತಾಣದಲ್ಲಿ ಹೈಡ್ರಾಮ್ ಬಗ್ಗೆ ಮಾಹಿತಿ ದೊರೆಯಿತು. ಅದರ ಆಧಾರದಲ್ಲಿ ಸ್ವತಃ ಪಂಪ್ ತಯಾರಿಸಹೊರಟರು. ಕೆರೆಯ ನೀರಿನ ಮಟ್ಟದಿಂದ ಎರಡೂವರೆ ಅಡಿ ತಗ್ಗಿನಲ್ಲಿ ಹೈಡ್ರಾಮ್ ಪಂಪ್ ಜೋಡಣೆ. ಇಲ್ಲಿಂದ ಇದು ಇಪ್ಪತ್ತೈದು ಅಡಿ ಎತ್ತರಕ್ಕೆ ನೀರನ್ನು ಮೇಲೆತ್ತುತ್ತದೆ - ಹಗಲು ರಾತ್ರಿ ಎನ್ನದೆ.
ಪಂಪಿನ ಕಾರ್ಯಕ್ಷಮತೆ
ಪೈಪ್ ನಲ್ಲಿ ನೀರು ಹರಿಯತೊಡಗಿದಾಗ ವೇಸ್ಟ್ ವಾಲ್ವ್
ಮುಚ್ಚಿಕೊಳ್ಳುತ್ತದೆ. ಇದರಿಂದ ಚಲನ ಶಕ್ತಿ ಉಂಟಾಗಿ ನೀರು ಹಿಮ್ಮುಖ ಚಲಿಸಿ ಏಕಮುಖ ಕವಾಟದ ಮೇಲೆ ಒತ್ತಡ ಸೃಷ್ಟಿಸುತ್ತದೆ. ಆಗ ಏಕಮುಖ ಕವಾಟ ಮೇಲಕ್ಕೆ ತೆರೆದುಕೊಳ್ಳುತ್ತದೆ. ನೀರು ಏಕಮುಖ ಕವಾಟದ ಮೂಲಕ
ಸಂಚಿತ ಶಕ್ತಿ ಶೂನ್ಯವಾಗುವ ತನಕ ಮೇಲ್ಮುಖ ಚಲಿಸಿ ವಾಯುಗೂಡಿನಲ್ಲಿ ಸಂಗ್ರಹವಾಗುತ್ತದೆ. ಈ ಪ್ರಕ್ರಿಯೆ ಪುನರಾವರ್ತಿಸಿ
ಒಂದು ನಿರ್ದಿಷ್ಟ ಹಂತಕ್ಕೆ ನೀರು ಏರಿಕೆಯಾಗುತ್ತದೆ. ಆಗ ವಾಯುಗೂಡಿನ ಒತ್ತಡದಿಂದಾಗಿ ನೀರು ಗೇಟ್ವಾಲ್ವ್ ಮೂಲಕ ಪೈಪ್ ನಲ್ಲಿ ಮೇಲಕ್ಕೆ
ಹರಿಯುತ್ತದೆ.
ಪೈಪ್ ನಲ್ಲಿ ಹೊರಬರುವ ನೀರಿನ ಪ್ರಮಾಣ ಮತ್ತು ಏರುವ
ಎತ್ತರವು ಸಂಗ್ರಹಾಗಾರದಲ್ಲಿರುವ ನೀರಿನ ಎತ್ತರ ಮತ್ತು ಹೈಡ್ರಾಮ್ ಪಂಪ್ ಇರಿಸಿದ ಸ್ಥಳದ ಎತ್ತರವನ್ನು
ಅವಲಂಬಿಸಿದೆ. ಪಂಪನ್ನು ನೀರು ಸಂಗ್ರಹಾಗಾರದಿಂದ 150 ಅಡಿ ದೂರದಲ್ಲಿ ಇರಿಸಬೇಕು. ಪೂರೈಕೆ ಪೈಪ್ ಮೂವತ್ತು ಡಿಗ್ರಿಯಲ್ಲಿ ಹೈಡ್ರಾಮ್ ಪಂಪ್ ಗೆ ಜೋಡಿಸಿರಬೇಕು. ನೀರಿನ ಹರಿವಿನ ಒತ್ತಡ
ನಿರ್ಮಿಸಲು ಇದು ಅಗತ್ಯ.
“ನಮ್ಮ ಜಮೀನಿನಲ್ಲಿ ಇರುವಂತೆ ಸದಾ ಹರಿಯುವ ನೀರಿನ ಸೆಲೆ ಇದ್ದರೆ ಇಂತಹ ಹೈಡ್ರಾಮ್ ಪಂಪ್ ಯಶಸ್ವಿಯಾಗಿ
ಕಾರ್ಯ ನಿರ್ವಹಿಸಬಲ್ಲುದು” ಎನ್ನುತ್ತಾರೆ ಶಿವ. ಹರಿಯುವ ತೋಡು ನೀರಿಗೆ ಕಟ್ಟದ ತಡೆಯೊಡ್ಡಿದರೆ ಅಲ್ಲಿಯೂ ಹೈಡ್ರಾಮ್ ನಡೆಸಬಹುದು.
ಹೈಡ್ರಾಮಿಗೆ ತಯಾರಿ ಖರ್ಚುಗಳು ಕಡಿಮೆ. ಇಂಧನ ಬೇಕಿಲ್ಲ. ಶೂನ್ಯ ನಿರ್ವಹಣಾ ವೆಚ್ಚ. ಪಂಪಿಗೆ ಪೂರೈಕೆಯಾಗುವ
ನೀರಿನ ಹತ್ತನೇ ಒಂದು ಭಾಗ ನೀರು ಮಾತ್ರ ಮೇಲೆ ಹೋಗಿ ಹೊರಹೊಮ್ಮುತ್ತದೆ. ‘ಆದುದರಿಂದಲೇ ಇದು ನಮ್ಮಲ್ಲಿ ಜನಪ್ರಿಯವಾಗಿಲ್ಲ’ ಎಂಬುದು ಶಿವಸುಬ್ರಹ್ಮಣ್ಯರ
ಅಭಿಪ್ರಾಯ.
ಹೈಡ್ರಾಮ್ ಪಂಪಿಗೆ ಮಾರುಕಟ್ಟೆಯಲ್ಲಿ ಹತ್ತೊಂಭತ್ತು
ಸಾವಿರ ರೂಪಾಯಿ ಬೆಲೆಯಿದೆ. ಆದರೆ ಇವರಿಗಾದ ವೆಚ್ಚ ಒಂದು ಸಾವಿರ ರೂಪಾಯಿ ಮಾತ್ರ! ಇದರ ತಯಾರಿ-ಉಪಯೋಗದ ಬಗ್ಗೆ ಇತರ ಕೃಷಿಕರಿಗೂ
ಮಾಹಿತಿ ಕೊಡೋಣ ಎಂಬ ಹುಮ್ಮಸ್ಸಿನಿಂದ ಶಿವ ತಮ್ಮ ಹೈಡ್ರಾಮ್ ಪಂಪನ್ನು ಪುತ್ತೂರಿನ ಕೃಷಿ ಯಂತ್ರ ಮೇಳದಲ್ಲಿ
ಪ್ರದರ್ಶಿಸಿದ್ದರು. ಅಲ್ಲಿ ಕೃಷಿಕರು ತೋರಿದ ಉತ್ತಮ ಪ್ರತಿಕ್ರಿಯೆ ಇವರಿಗೆ ಸಂತಸ ನೀಡಿದೆ.
ಅಡಿಕೆ ಪತ್ರಿಕೆ,ಫೆಬ್ರವರಿ-2013
0 comments:
Post a Comment